Close

Rajatha Mahothsava Udupi

Final_logo.

ಉಡುಪಿ ಜಿಲ್ಲೆಯ ಪಕ್ಷಿನೋಟ

   ಅದ್ಭುತವಾದ ನಿಸರ್ಗ ಸೌಂದರ್ಯದಿಂದ ಕೂಡಿದ ಉಡುಪಿ ಜಿಲ್ಲೆಯು ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ದುರ್ಗಮವಾದ ಪಶ್ಚಿಮ ಘಟ್ಟ ಶ್ರೇಣಿ, ಉತ್ತರದಲ್ಲಿ ಉತ್ತರ ಕನ್ನಡ ಜಿಲ್ಲೆ ಹಾಗೂ ದಕ್ಷಿಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊಂದಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಉಡುಪಿಯು 1997 ರಲ್ಲಿ ಸ್ವತಂತ್ರ ಜಿಲ್ಲೆಯಾಗಿ ಅಸ್ತಿತ್ವ ಹೊಂದಿದೆ.

   ಉಡುಪಿ ಜಿಲ್ಲೆ 3575 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳ ಜೊತೆಗೆ ಹೊಸದಾಗಿ ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿ ತಾಲೂಕನ್ನು ಒಳಗೊಂಡಿದೆ. 2011 ರ ಜನಗಣತಿ ಪ್ರಕಾರ 11,77,000 ಜನ ಸಂಖ್ಯೆ ಹೊಂದಿರುವ ಜಿಲ್ಲೆಯ ಪ್ರಮುಖ ಭಾಷೆ ತುಳು, ಕನ್ನಡ ಮತ್ತು ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಉಡುಪಿ ಮತ್ತು ಮಂಗಳೂರು ಜಿಲ್ಲೆಯನ್ನು ಒಳಗೊಂಡ ಇಂದಿನ ದಕ್ಷಿಣ ಕನ್ನಡ ಜಿಲ್ಲೆಯನ್ನು ತುಳುನಾಡು ಎಂದೂ ಕರೆಯಲಾಗುತ್ತಿದೆ.

   ಜಿಲ್ಲೆಯನ್ನು ಪ್ರಾಕೃತಿಕವಾಗಿ ಕರಾವಳಿ, ಒಳನಾಡು ಮತ್ತು ಘಟ್ಟ ಪ್ರದೇಶವೆಂದು ವಿಂಗಡಣೆ  ಮಾಡಲಾಗಿದೆ. ಪಶ್ಚಿಮ ಘಟ್ಟ ಹಲವಾರು ನದಿಗಳ ಉಗಮ ಸ್ಥಾನವಾಗಿದ್ದು, ಇವುಗಳಲ್ಲಿ ಜಿಲ್ಲೆಯ ಸೌಪರ್ಣಿಕ, ಸ್ವರ್ಣ, ಸೀತಾ, ವಾರಾಹಿ ಹಾಗೂ ಗಂಗೊಳ್ಳಿ ನದಿಗಳು ಪ್ರಮುಖವಾಗಿವೆ. ಇವು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತವೆ.

   ಉಡುಪಿ ಕರ್ನಾಟಕದ ಮುಖ್ಯ ನಗರವಾಗಿದ್ದು,  ಕೃಷಿ ಮತ್ತು ಮೀನುಗಾರಿಕೆ ಇಲ್ಲಿನ ಮುಖ್ಯ ಉದ್ಯೋಗ. ಭತ್ತ, ಅಡಿಕೆ, ತೆಂಗು ಹಾಗೂ ಗೇರು ಇಲ್ಲಿಯ ಪ್ರಮುಖ ಬೆಳೆ. ಇತ್ತೀಚೆಗೆ ಈ ಭಾಗದ ರೈತರು ರಬ್ಬರ್ ಬೆಳೆಗಳನ್ನು ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ.

   ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮಾಡುವುದು ಈಗಿನಷ್ಟು ಸುಲಭವಾಗಿರಲಿಲ್ಲ. ಬಡತನ, ಮೈಲುಗಟ್ಟಲೆ ನಡೆಯಬೇಕಾಗಿತ್ತು. ಹೆತ್ತವರ ಅನಾಸಕ್ತಿ, ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರ ಸಂಖ್ಯೆ ನಿಯಮಿತವಾಗಿತ್ತು. ಸ್ವಾತಂತ್ರ್ಯ ನಂತರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರ ಬದಲಾವಣೆ ಕಂಡಿದೆ.

   ಮಣಿಪಾಲ ಎಂಬ ಬೋಳು ಗುಡ್ಡ ಈಗ ಅಂತರಾಷ್ಟ್ರೀಯ ವಿದ್ಯಾ ಕೇಂದ್ರವಾಗಿದೆ. 70 ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸಿದರೆ ವಿದೇಶಕ್ಕೆ ಹೋಗಿ ಬಂದ ಅನುಭವ. ಸ್ವಾಯತ್ತತೆ ಹೊಂದಿದ 3 ವಿಶ್ವ  ವಿದ್ಯಾಲಯಗಳು ಇವೆ.

   ಕರಾವಳಿಯಲ್ಲಿ ಜನಸಾಂದ್ರತೆ ಹೆಚ್ಚು. ಆದರೆ ಭೂ ಹಿಡುವಳಿ  ಕಡಿಮೆ. ಆದ್ದರಿಂದ ಜನರು ಉದ್ಯೋಗ  ಅರಸಿ ಬೇರೆ ಊರುಗಳಿಗೆ ವಲಸೆ ಹೋಗುತ್ತಾರೆ. ಅತ್ಯುನ್ನತ ಶಿಕ್ಷಣ ಪಡೆದವರು ಇಂಗ್ಲೆಂಡ್, ಅಮೇರಿಕಾ, ಐರೋಪ್ಯ ದೇಶಗಳಿಗೆ ಹೋದರೆ, ಉಳಿದವರು ಮಧ್ಯ ಪ್ರಾಂತ್ಯ ದೇಶಗಳಿಗೆ ಹಾಗೂ ಮುಂಬೈ, ಬೆಂಗಳೂರು ನಗರಗಳಿಗೆ ವಲಸೆ ಹೋಗಿದ್ದಾರೆ.

   ಜಿಲ್ಲೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ರಾಷ್ಟ್ರಮಟ್ಟದಲ್ಲಿ ಪಡೆದರೆ, ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಹೊಸ ಪ್ರಯೋಗಗಳ ರೂಪದಲ್ಲಿ ನೂತನ ಸೇವೆ, ಉತ್ಪನ್ನಗಳ ರೂಪದಲ್ಲಿ ಹಾಗೂ ಬ್ಯಾಂಕಿಂಗ್ ನೀತಿ ಧೋರಣೆಗಳ ರೂಪದಲ್ಲಿ ಮಹತ್ತರ ಕಾಣಿಕೆ ನೀಡಿದೆ. 1906 ರಲ್ಲಿ ಕಾರ್ಪೋರೇಷನ್ ಬ್ಯಾಂಕ್, 1925 ರಲ್ಲಿ ಸಿಂಡಿಕೇಟ್ ಬ್ಯಾಂಕ್‍ ಆರಂಭವಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 20 ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕುಗಳ 407 ಶಾಖೆಗಳು ಹಾಗೂ 680 ಕ್ಕೂ ಹೆಚ್ಚು ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

   ಮುಂಬೈ-ಕೊಚ್ಚಿನ್ ರಾ.ಹೆ 66, ಕೇರಳ ಹಾಗೂ ಮುಂಬೈ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳನ್ನು ಹಾಗೂ ಕೊಂಕಣ ರೈಲು ಉಡುಪಿಯ ಮೂಲಕ ಹಾದುಹೋಗುವುದರಿಂದ ಸಂಪರ್ಕ ಕ್ರಾಂತಿಯಾಗಿ ಇಲ್ಲಿನ ಜನರ ಆರ್ಥಿಕ ವಹಿವಾಟನ್ನು ವೃದ್ಧಿಸಿದೆ.

   ಜಿಲ್ಲೆಯಲ್ಲಿ ಸರಕಾರಿ ಬಸ್‍ಗಳ ಸಂಖ್ಯೆ ಕಡಿಮೆ ಇದ್ದು, ಸಹಕಾರಿ ತತ್ವದಡಿ ಖಾಸಗಿ ಬಸ್‍ಗಳು ಜಿಲ್ಲೆಯಾದ್ಯಂತ ಮತ್ತು ಕರ್ನಾಟಕದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ.

   ಜಿಲ್ಲೆಯಲ್ಲಿ ಸರಾಸರಿ 3409 ರಿಂದ 4535 ಮಿ.ಮಿ ಮಳೆಯಾಗುತ್ತಿದ್ದು, ಬಹುತೇಕ ರೈತರು ಕೃಷಿಗಾಗಿ ಮಳೆಯನ್ನು ಅವಲಂಭಿಸಿದ್ದಾರೆ. ಜಿಲ್ಲೆಯಲ್ಲಿ ದೊಡ್ಡ ರೈತರ ಸಂಖ್ಯೆ ಅತೀ ಕಡಿಮೆ ಇದ್ದು, ಮಧ್ಯಮ ಹಾಗೂ ಸಣ್ಣ ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ.

   ಮಲ್ಪೆ ಏಷ್ಯಾದ ಅತಿದೊಡ್ಡ ಸರ್ವಋತು ಮೀನುಗಾರಿಕೆ ಬಂದರು. ಮೀನುಗಾರಿಕೆ ಉಡುಪಿಯ ಬಹುದೊಡ್ಡ ಆದಾಯದ ಮೂಲ. ಇದು ಅಸಂಖ್ಯಾತ ಜನರಿಗೆ ಉದ್ಯೋಗಾವಕಾಶ ಸೃಷ್ಠಿಸಿದೆ. ಮಲ್ಪೆ ಬಂದರಿನ ಅಭಿವೃದ್ಧಿ ಕಾರ್ಯಗಳು ಪ್ರಗತಿಯತ್ತ ಸಾಗುತ್ತಿದೆ.

   ಜಿಲ್ಲೆಯು ರಚನೆಯಾಗಿ 25 ವರ್ಷಗಳಾಗಿದ್ದು, ಭೌಗೋಳಿಕ ದೃಷ್ಟಿಯಿಂದ ಇದು ಚಿಕ್ಕ ಜಿಲ್ಲೆ. ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಅಧಿಕವಾಗಿದ್ದು, 1000 ಪುರುಷರಿಗೆ 1094 ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಹಾಗೂ ಇಂದಿಗೂ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿರುವುದು ಜಿಲ್ಲೆಯ ಹೆಗ್ಗಳಿಕೆ. ರಾಜ್ಯಮಟ್ಟದಲ್ಲಿ ಇದಕ್ಕೆ ತದ್ವಿರುದ್ಧವಾಗಿ 1000 ಪುರುಷರಿಗೆ ಕೇವಲ 964 ಮಹಿಳೆಯರಿದ್ದಾರೆ.

   ಜಿಲ್ಲೆಯ ಜನ ಸಾಮಾನ್ಯರಿಗೆ ಸರಕಾರದ ಸೌಲಭ್ಯಗಳು, ಯೋಜನೆಗಳು ಹಾಗೂ ಮತ್ತಿತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಅನುಕೂಲವಾಗುವಂತೆ ಒಂದೇ ಸೂರಿನ ಅಡಿಯಲ್ಲಿ ಮಣಿಪಾಲ್‍ನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ,  ಜಿಲ್ಲಾ ಪಂಚಾಯತ್‍ನ ಕಚೇರಿ ಸೇರಿದಂತೆ 52 ಕಚೇರಿಗಳು ರಜತಾದ್ರಿ ಕಟ್ಟಡದಲ್ಲಿವೆ. 

   ಭೂಗರ್ಭದಲ್ಲಿ ವಿದ್ಯುತ್‍ ಉತ್ಪಾದಿಸುವ ರಾಜ್ಯದ ಏಕೈಕ ಘಟಕ ವಾರಾಹಿ  ಜಲ ವಿದ್ಯುತ್ ಸ್ಥಾವರ. 230 ಮೆ.ವ್ಯಾ. ವಿದ್ಯುತ್‍ ಉತ್ಪಾದಿಸುವ ಈ ಜಲಸ್ಥಾವರ, ರಾಜ್ಯದಲ್ಲಿಯೇ ಅತ್ಯುತ್ತಮ ವಿದ್ಯುತ್‍ ಉತ್ಪಾದನಾ ಕೇಂದ್ರ ಎಂಬ ಹೆಗ್ಗಳಿಕೆ ಪಡೆದಿದೆ. ಎಣ್ಣೆಹೊಳೆ ನದಿಗೆ ಅಜೆಕಾರು ಸಮೀಪ ಆಣೆಕಟ್ಟನ್ನು ನಿರ್ಮಿಸಿ, ಏತ ನೀರಾವರಿ ಯೋಜನೆಯಿಂದಾಗಿ 1500 ಹೆ. ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

   ವಿಂಡೋಸ್ ಮತ್ತು ಮ್ಯಾಕ್ರೋಸ್‌ಗಳಲ್ಲಿ ಕೆಲಸ ಮಾಡುವ ಪ್ರಖ್ಯಾತ ಸಾಫ್ಟ್‌‌ವೇರ್ ಕಂಪೆನಿಯಾದ ರೋಬೋಸಾಫ್ಟ್‌  ಉಡುಪಿಯಲ್ಲಿ ಹುಟ್ಟಿ ಬೆಳೆದ ಕಂಪೆನಿಯಾಗಿದ್ದು, ಈ ಕಂಪೆನಿಯು ಉಡುಪಿಗೆ ಐ.ಟಿ ಜಗತ್ತಿನಲ್ಲಿ ಉತ್ತಮವಾದ ಸ್ಥಾನಮಾನವನ್ನು ತಂದಿರುವುದರ ಜೊತೆಗೆ, ವಿದೇಶಿ ವಿನಿಮಯಕ್ಕೆ ಹಾದಿ ಮಾಡಿಕೊಟ್ಟಿದೆ.

   ತುಳುನಾಡನ್ನು ಅಳುಪರು, ಹೊಯ್ಸಳರು, ವಿಜಯನಗರ ಅರಸರು ಹಾಗೂ ಕೆಳದಿಯ ನಾಯಕರೂ ಸೇರಿದಂತೆ ಅನೇಕ ರಾಜ ಮನೆತನದವರೂ ಆಳಿದ್ದಾರೆ. ಟಿಪ್ಪುವಿನ ಮರಣದ ನಂತರ ಬ್ರಿಟಿಷರು ಜಿಲ್ಲೆಯನ್ನು ಮದ್ರಾಸ್ ಸರಕಾರದ ಆಳ್ವಿಕೆಗೆ  ಒಳಪಡಿಸಿದರು. ಅಳುಪರ ರಾಜಧಾನಿಯಾಗಿದ್ದ ಬಾರಕೂರು, ಪ್ರಾಚೀನ ತುಳುನಾಡಿನ ವ್ಯಾಪಾರ ಕೇಂದ್ರವಾಗಿತ್ತು. 365 ದೇವಳಗಳಿದ್ದ ಇತಿಹಾಸ ಹೊಂದಿದೆ. ಇಲ್ಲಿಂದಲೇ ಮಧ್ಯ ಪ್ರಾಚ್ಯ ದೇಶಗಳಿಗೆ ರಫ್ತು ವಹಿವಾಟು ಮುಖ್ಯವಾಗಿ ಕರಿಮೆಣಸಿನ ವ್ಯಾಪಾರ ನಡೆಯುತ್ತಿತ್ತು.

   ಬಾರಕೂರಿನಿಂದ 8 ಕಿ.ಮೀ ದೂರದಲ್ಲಿರುವ ಮೆಕ್ಕಕಟ್ಟು ಇಲ್ಲಿ ಸುಮಾರು 14 ಶತಮಾನಗಳಿಗಿಂತಲೂ ಹಿಂದೆ ನಾಥಪಂಥದ ಪ್ರಭಾವ ಹೆಚ್ಚಾಗಿದ್ದ ಕಾಲದಲ್ಲಿ ನಿರ್ಮಾಣಗೊಂಡಿರುವ ಉರುಗಳೆಂದು ಕರೆಯಲ್ಪಡುವ ಎತ್ತರದ ವಾಸ್ತುಶಿಲ್ಪಗಳಿವೆ.

   ಉಡುಪಿ ಎಂದ ತಕ್ಷಣ ನೆನಪಾಗುವುದು ಉಡುಪಿಯ ಶ್ರೀಕೃಷ್ಣ ದೇವರು. ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣನಿಗೆ ಸರದಿಯ ಪ್ರಕಾರ ಅಷ್ಠಯತಿಗಳಿಂದ ಪೂಜೆ ನಡೆಯುತ್ತಿದೆ. ಇಲ್ಲಿ ನಡೆಯುವ ಪರ್ಯಾಯ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುವಲ್ಲಿ ಮೇಲ್ಪಂಕ್ತಿಯಲ್ಲಿದೆ.

  ಜಿಲ್ಲೆಯ ಪ್ರಾಚೀನ ದೇವಾಲಯಗಳ ಪೈಕಿ ಅನಂತೇಶ್ವರ ಚಂದ್ರಮೌಳೀಶ್ವರ ದೇವಾಲಯವೂ ಒಂದು. ಗಜಪೃಷ್ಠ ಆಕೃತಿಯ ದೇವಾಲಯದ ಶಿಲ್ಪ ವೈಭವವು ಬೌದ್ಧರ ಗೃಹಾಂತರ ದೇವಾಲಯಗಳ ಪ್ರಭಾವಕ್ಕೆ ಒಳಪಟ್ಟಿದೆ. ತುಳುನಾಡಿನ ಸಮೃದ್ಧವಾದ ಪರಂಪರೆಯನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ನಾಗಾರಾಧನೆ, ಸಿರಿ, ಭೂತಕೋಲದಂತಹ ಆರಾಧನೆ ಪದ್ಧತಿಯಿದ್ದು, ಹುಲಿವೇಷ, ಆಟಿಕಳಂಜದಂತಹ ಕುಣಿತವಿದೆ. ಕೋಳಿ ಅಂಕ, ಕಾಯಿ ಕುಟ್ಟುವುದು,  ಮೈನವಿರೇಳಿಸುವಂತಹ  ಕಂಬಳದಂತಹ ಜಾನಪದ ಕ್ರೀಡೆಗಳಿವೆ.  

   ಮೂಕಾಂಬಿಕಾ ಮಾತೆಯಿಂದ ಪ್ರಸಿದ್ಧ ಯಾತ್ರಾ ಸ್ಥಳವೆಂದೇ ಗುರುತಿಸಲ್ಪಡುವ ಕೊಲ್ಲೂರು, ಆಧ್ಯಾತ್ಮ, ಸಾಹಸ, ರಮಣೀಯ ಪಶ್ಚಿಮಘಟ್ಟ ಪರಿಸರಕ್ಕೆ ಹಾಗೂ ಉತ್ತಮ ಬೀಚ್‍ಗಳನ್ನು ಹೊಂದಿರುವ, ಸೌಪರ್ಣಿಕ ನದಿ ದಂಡೆಯ ಮೇಲಿರುವ ಶಿವಶಕ್ತಿ ಸಮ್ಮಿಲನದ ಜ್ಯೋತಿರ್ಲಿಂಗ ಸ್ವರೂಪಿಣಿ ತಾಯಿ ಮೂಕಾಂಬಿಕೆ, ಕೈಬೀಸಿ ತನ್ನೆಡೆಗೆ ಸೆಳೆಯುತ್ತಿರುವ ಕೊಡಚಾದ್ರಿ ಚಾರಣಿಗರ ಆಕರ್ಷಣೀಯ ಸ್ಥಳವಾಗಿದೆ.

   ಸೈಂಟ್ ಮೇರೀಸ್ ದ್ವೀಪವೆಂದು ಪ್ರಸಿದ್ಧಿ ಪಡೆದಿರುವ ಈ ದ್ವೀಪ ಪ್ರವಾಸಿಗರಿಗೆ ಅಚ್ಚುಮೆಚ್ಚು. ಸುಮಾರು 6 ಕೋಟಿ ವರ್ಷಗಳ ಹಿಂದೆ ಭೂಮಿಯಾಳದಿಂದ ಚಿಮ್ಮಿದ ಲಾವಾ ರಸ ತಣ್ಣಗಾಗಿ, ಗಟ್ಟಿಯಾಗಿ ಕಾಲಾಂತರದಲ್ಲಿ ಈಗಿನ ರೂಪದ ಲಂಬಾಕಾರದ ಅಗ್ನಿ ಶಿಲೆಗಳಾಗಿವೆ. ಇಡೀ ಭಾರತದಲ್ಲಿ ಇಂತಹ ಅಗ್ನಿಶಿಲಾ ರಚನೆಗಳು ಉಡುಪಿಯಲ್ಲಿರುವುದು, ದೇಶದ ಪ್ರವಾಸೋದ್ಯಮಕ್ಕೆ ವಿಶಿಷ್ಟ ಮೆರುಗಾಗಿದೆ.

  ಕುಂದಾಪುರ ತಾಲೂಕಿನಲ್ಲಿರುವ ಗಂಗೊಳ್ಳಿ ಸೇತುವೆ ಜಿಲ್ಲೆಯಲ್ಲಿಯೇ ಅತೀ ದೊಡ್ಡದಾದ ಸೇತುವೆ. ಇದೇ ತಾಲೂಕಿನ ಕುಂಭಾಶಿ ಗುಡ್ಡದ ಮೇಲೆ ಕುಳಿತಿರುವ ಆನೆಗುಡ್ಡೆ ಗಣೇಶ  ಭಕ್ತಾದಿಗಳನ್ನು ತನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆಯುವ ಉತ್ತಮ ದೈವಿಕ ಪ್ರೇಕ್ಷಣೀಯ ಸ್ಥಳವಾಗಿದೆ.

   ಒಂದು ಕಾಲದಲ್ಲಿ ಜೈನರ ನೆಲೆಬೀಡಾಗಿದ್ದ ಕಾರ್ಕಳ, ಈ ಪಟ್ಟಣದ ಎತ್ತರದ ಪ್ರದೇಶದಲ್ಲಿರುವ ಎಲ್ಲಾ ರಾಗ-ದ್ವೇಷಾಧಿಗಳನ್ನು ಮೆಟ್ಟಿನಿಂತ 38 ಅಡಿ ಎತ್ತರದ ಗೊಮ್ಮಟೇಶ್ವರ ರಾಜ್ಯದ ಅತೀ ಎತ್ತರದ ಎರಡನೇ ಏಕಶಿಲಾ ವಿಗ್ರಹ. ಇದರ ಎದುರಿಗೆ ಚತುರ್ಮುಖ ಬಸದಿ ಇದೆ. ಸರ್ವಧರ್ಮಿಯರಿಂದ ಆರಾಧನೆಗೊಳ್ಳುತ್ತಿರುವ ಅತ್ತೂರು ಚರ್ಚ್ ಕಾರ್ಕಳದಲ್ಲಿದೆ.

   ತುಳುನಾಡಿನ ಜಾನಪದ ವೀರರಾದ ಕೋಟಿಚೆನ್ನಯ್ಯರ ಥೀಂ ಪಾರ್ಕ್‍ನ ಕಾಮಗಾರಿ ಕಾರ್ಕಳದಲ್ಲಿ  ಪ್ರಗತಿಯಲ್ಲಿದ್ದು, ಪ್ರವಾಸೋದ್ಯಮಕ್ಕೆ ಮತ್ತೊಂದು ಮೆರುಗು ತಂದಿದೆ.

   ಪ್ರವಾಸೋದ್ಯಮಕ್ಕೆ ಕೈಬೀಸಿ ಕರೆಯುವ ಜಿಲ್ಲೆ ಉಡುಪಿಯಾಗಿದ್ದು, ಅದಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯು ಸುಂದರ ಮನಸೆಳೆಯುವ ಮೋಹಕವಾದ 105 ಕಿ.ಮೀ ಉದ್ದದ ಕಡಲ ತೀರವನ್ನು ಹೊಂದಿದ್ದು, ಅದರಲ್ಲೂ ಕುಂದಾಪುರ ತಾಲೂಕಿನ ಮರವಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಒಂದು ಕಡೆ ಅರಬ್ಬೀ ಸಮುದ್ರ, ಇನ್ನೊಂದೆಡೆ ಸೌಪರ್ಣಿಕ ನದಿ, ಅದರ ನಡುವೆ ಸಾಗುವ ರಾಷ್ಟ್ರೀಯ ಹೆದ್ದಾರಿ 66. ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಒಂದೇ ಜಾಗದಲ್ಲಿ ನೋಡುವುದಕ್ಕೆ ಸಾಕ್ಷಿಭೂತವಾಗಿದೆ.

  ಪ್ರತಿಯೊಬ್ಬ ಪ್ರವಾಸಿಯೂ ನೋಡಲೇ ಬೇಕಾದ ಇನ್ನೊಂದು ಜಾಗವೆಂದರೆ ಹಸ್ತಶಿಲ್ಪ ಕಲಾ ಗ್ರಾಮ. ಇಲ್ಲಿ ಮರು ಸೃಷ್ಠಿಸಲಾದ ಅರಮನೆಗಳು, ಮನೆತನಗಳು ಪ್ರವಾಸೋದ್ಯಮಕ್ಕೆ ಭವ್ಯತೆ ತಂದಿದೆ.

  ತುಳುನಾಡಿನ ಕಲೆ, ಸಂಸ್ಕೃತಿ, ಭಾಷೆ, ಜನಪದವನ್ನು ಅಧ್ಯಯನ ಮಾಡುವುದಕ್ಕಾಗಿ ಮೀಸಲಾದ ಸಂಸ್ಥೆಯೊಂದು ಉಡುಪಿಯಲ್ಲಿದೆ. ಅದುವೇ ಗೋವಿಂದ ಪೈ ಸಂಶೋಧನಾ ಕೇಂದ್ರ. ಇಲ್ಲಿ ಮೌಖಿಕ ಪರಂಪರೆಯ ಮೂಲಕ ಉಳಿದುಕೊಂಡು ಬಂದ ತುಳು ಜಾನಪದ ಕಲಾ ಪ್ರಕಾರಗಳನ್ನು ಸಂರಕ್ಷಿಸಲಾಗಿದೆ. ಅಧ್ಯಯನಶೀಲರಿಗೆ ಇದೊಂದು ಮಾಹಿತಿಯ ಕಣಜ. ತುಳುನಾಡಿನ ಸಂಪ್ರದಾಯ,  ಆಚಾರ-ವಿಚಾರ,  ಜಾನಪದ ಸಂರಕ್ಷಿಸಲು ಇಂದಿನ ಪೀಳಿಗೆಗೆ ತಲುಪಿಸಲು ಸಹಕಾರಿಯಾಗಿದೆ.

     ಶಿವರಾಮ ಕಾರಂತರು ಯಕ್ಷಗಾನ ರಂಗದಲ್ಲಿ ಪ್ರಯೋಗಗಳನ್ನು ಮಾಡಲು ಸ್ಥಾಪಿಸಿದ ಯಕ್ಷಗಾನ ಕೇಂದ್ರ ಕೂಡ ಉಡುಪಿಯಲ್ಲಿದೆ. ಅದೀಗ  ಗುರುಕುಲ ಪದ್ಧತಿಯಲ್ಲಿ ಆಸಕ್ತರಿಗೆ ಯಕ್ಷಗಾನ ಕಲಿಸುತ್ತಿದೆ. ಕನಕನ ಅಧ್ಯಯನ ಪೀಠವು ಇದೆ.ಯಕ್ಷ ರಂಗಾಯಣ ಸ್ಥಾಪನೆಯಾಗಿರುವುದು ಕೂಡ ಹೆಮ್ಮೆಯ ವಿಷಯ.

    ಆರೋಗ್ಯ ಮತ್ತು ವಿದ್ಯಾರ್ಜನೆಗೆ ಸಂಬಂಧಪಟ್ಟಂತೆ ಮಣಿಪಾಲ ಹೆಸರುವಾಸಿಯಾಗಿದೆ. ಅನೇಕ ಸುಸಜ್ಜಿತ ಆಸ್ಪತ್ರೆಗಳು ಹಾಗೂ ಅನೇಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ.

    ಉಡುಪಿ ಜಿಲ್ಲೆಗೆ ಶ್ರೀಮಂತ ಪರಂಪರೆಯಿದೆ. ಇಲ್ಲಿ ನಿಸರ್ಗ ಸೌಂದರ್ಯವಿದೆ. ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸುತ್ತಿದೆ. ಹಾಗಾಗಿ ಉಡುಪಿ ದೇಶ-ವಿದೇಶಗಳ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿರುವ, ಸಾಗರದಲೆಗಳಂತೆ ನಿರಂತರವಾಗಿ ತನ್ನೆಡೆಗೆ ಎಲ್ಲರನ್ನೂ ಸೆಳೆಯುತ್ತಿರುವ ವಿವಿಧತೆಯಲ್ಲಿ ತನ್ನದೇ ವಿಶಿಷ್ಟತೆಯನ್ನು ಉಳಿಸಿಕೊಂಡಿರುವ ಪರಶುರಾಮನ ಸೃಷ್ಟಿಯೆಂದೇ ಹೆಸರಿಸಲ್ಪಟ್ಟಿರುವುದು ಈ ನಮ್ಮಉಡುಪಿ.                                                                                                                                         

launch.
Hon'ble CM Karnataka.
ಶ್ರೀ ಬಸವರಾಜ ಬೊಮ್ಮಾಯಿ ಮಾನ್ಯ ಮುಖ್ಯಮಂತ್ರಿ
Angara new.
ಶ್ರೀ ಎಸ್. ಅಂಗಾರ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು
shobha MP.
ಶೋಭಾ ಕರಂದ್ಲಾಜೆ ಮಾನ್ಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರು, ಭಾರತ ಸರ್ಕಾರ
kota sriniwas poojary.
ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ
Minister.
ಶ್ರೀ ವಿ ಸುನಿಲ್ ಕುಮಾರ್ ಮಾನ್ಯ ಸಚಿವರು, ಕರ್ನಾಟಕ ಸರ್ಕಾರ