ಇತಿಹಾಸ
ಉಡುಪಿ ಹೆಸರನ್ನು ತುಳು ಹೆಸರು “ಒಡಿಪು” ಇಂದ ಪಡೆಯಲಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ. ತುಳು ಹೆಸರು ಮಲ್ಪೆಯಲ್ಲಿರುವ ವಡಭಾಂಡೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದೆ. ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ “ಉಡು” ಹಾಗೂ “ಪ” ಅಂದರೆ ನಕ್ಷತ್ರ ಹಾಗೂ ದೇವರು ಈ ಪದಗಳಿಂದ ” ಉಡುಪಿ” ಎಂಬ ಪದವು ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕಥೆಗಳಲ್ಲಿ ವ್ಯಾಖ್ಯಾನಿಸಲಾಗಿದೆ. ದಂತಕಥೆಗಳ ಪ್ರಕಾರ ಒಮ್ಮೆ ಚಂದ್ರನು ರಾಜ ದಕ್ಷನ 27 ಹೆಣ್ಣು ಮಕ್ಕಳನ್ನು (ಹಿಂದೂ ಜ್ಯೋತಿಷ್ಯ ಪ್ರಕಾರ 27 ನಕ್ಷತ್ರಗಳು) ಮದುವೆಯಾದಾಗ ಚಂದ್ರನ ಬೆಳಕು ಒಮ್ಮೆ ರಾಜ ದಕ್ಷನ ಶಾಪದಿಂದ ಕಡಿಮೆಯಾಯಿತು. ಚಂದ್ರನು ತನ್ನ ಮೂಲ ಹೊಳಪನ್ನು ಹಿಂತಿರುಗಿಸಲು ಶಿವನನ್ನು ಪ್ರಾರ್ಥಿಸಿದನು. ಶಿವನು ಈತನ ಭಕ್ತಿಗೆ ಮೆಚ್ಚಿ ಬೆಳಕು ಪುನರ್ ಮರುಕಳಿಸುವಂತೆ ಮಾಡಿದನು. ಚಂದ್ರ ಹಾಗೂ ಆತನ ಪತ್ನಿಯಂದಿರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ದರಿಂದ ಅಲ್ಲಿ ಲಿಂಗವೊಂದು ಉದ್ಭವವಾಗಿದ್ದು ಅದು ಇವತ್ತಿಗೂ ಕಾಣಲು ಸಿಗುತ್ತದೆ. ಆದ್ದರಿಂದ ದಂತಕಥೆಗಳ ಪ್ರಕಾರ ಉಡುಪಿಯು ” ನಕ್ಷತ್ರಗಳ ದೇವರು -ಚಂದ್ರನ ನಾಡು” ಎಂದೂ ಸಹ ಪ್ರಸಿದ್ಧಿಯನ್ನು ಪಡೆದಿದೆ.